೧
ಮನೆ ಸೇರಿದಾಗ ಕತ್ತಲಾಗಿತ್ತು. ನಾಲಗೆ ತಿಕ್ಕಿ ತಿಕ್ಕಿ ತೊಳೆದೆ. ವಾಸನೆ ಇನ್ನೂ ಬರುತ್ತಿದೆ ಎನ್ನುವ ಗುಮಾನಿ ಇದ್ದೇಇತ್ತು. ಅಡಿಗೆ ಮನೆಗೆ ಹೋಗಿ ಯಾಲಕ್ಕಿಯ ಎಸಳು ಬಾಯಾಡಿಸಿದೆ. ತಲೆ ಭಾರ ವಾಗಿತ್ತು. ಅದು ವೈನ್ ನ ಪ್ರಭಾವವೊ
ಅಥವಾ ದೀಪಾ ಆಡಿದ ಮಾತಿನದೊ ಗೊತ್ತಿಲ್ಲ. ಅತ್ತೆ ಟಿವಿ ಮುಂದೆ ಕುಳಿತಿದ್ದರು.ಇವರು ಬಂದಿದ್ದರು. ಚಪಾತಿ ಮಾಡಲು ಹಿಟ್ಟು
ಕಲಿಸಲು ಶುರು ಮಾಡಿದೆ. ಕೈಗಳು ಯಾಂತ್ರಿಕವಾಗಿ ಕೆಲಸ ಮಾಡಿತ್ತಿದ್ದವು. ಮನಸ್ಸು ಎಲ್ಲೊ ಅಲೆಯುತ್ತಿತ್ತು. ದೀಪಾಳ
ಅನಿರೀಕ್ಷಿತ ಭೇಟಿ,ಅವಳೊಡನೆ ಚರ್ಚಿಸಿದ ವಿಷಯಗಳು..,ಕೊನೆಯಲ್ಲಿ ಅವಳಾಡಿದ ಮಾತು ಎಲ್ಲ ಗುಂಯ್ ಗುಡುತ್ತಿದ್ದವು.
ಇವರು ಹತ್ತಿರ ಬಂದು ನಿಂತಿದ್ದು, ಎರಡು ಸಾರಿ ಕರೆದಿದ್ದು ನನಗೇ ಗೊತ್ತೇ ಆಗಿರಲಿಲ್ಲ.
ಸೀರೆ ಸೆರಗು ಸರಿಸಿ ಹೊಟ್ಟೆಯ ಮೇಲೆ ಕೈ ಆಡಿಸುತ್ತ ಇವರು ಮುದ್ದುಗರೆದರು. ಗಡ್ಡ ಚುಚ್ಚಿದರೂ ಹಿತ ಇತ್ತು.
"ಯಾಕ ರಾಣಿಯವ್ರಿಗೆ ಕೆಲಸ ಬಹಾಳ ಇತ್ತೇನು...." ಇವರ ಪ್ರಶ್ನೆ ಸಹಜವಾಗಿತ್ತು.
"ಇಲ್ಲ ನನ್ನ ಹಳೆ ಫ್ರೆಂಡ ಸಿಕ್ಕಿದ್ಲು ಅಕಿ ಜೋಡಿ ಸ್ವಲ್ಪ ಶಾಪಿಂಗ್ ಹೋಗಿದ್ದೆ..." ಅವರಿಂದ ಬಿಡಿಸಿಕೊಳ್ಳುತ್ತ ಹೇಲಿದೆ. ವೈನ್ ವಾಸನಿ ಇವರಿಗೂ ಬಡಿತೊ ಹೆಂಗ ಎಂಬ ದಿಗಿಲು ನನಗೆ. ಸುಜನ ಅಡಿಗೆ ಮನೆಗೆ ಬಂದಳು. ನಿರಾಳ ಆತು. ಮಗಳೊಡನೆ
ಇವರು ಹೊರನಡೆದರು.
--------೦-----------೦----------೦-------------೦
ಗಡಿಯಾರ ನೋಡಿದೆ ಹನ್ನೆರಡಾಗಿತ್ತು... ಕಾಟಿನ ಕೆಳಗಡೆ ಬಿದ್ದಿದ್ದ ನೈಟಿ ತೆಗೆದುಕೊಂಡು ಬಾತ್ ರೂಮ್ಗೆ
ಹೋದೆ. ಬೇಸಿನ್ ನ ಕನ್ನಡಿಯಲ್ಲಿ ಮುಖದ ಮಿನುಗುವ ನಗುವಿಗೆ ಯಾವ ಅರ್ಥ ಇದೆ.. ವಾರಗಟ್ಟಲೆ ಹಸಿದಿದ್ದೆ ಹೊಟ್ಟೆ
ತುಂಬಿದುದರ ಸಂಕೇತವೆ ಅಥವಾ ಈ ನಗು ಸಹ ನನ್ನಂತೆಯೇ ಯಾಂತ್ರಿಕ ವೇ..ತಳಮಳ ಮರೆಮಾಚಲು ನಾ ಧರಿಸಿದ
ಮುಖವಾಡವೇ....
ದೀಪಾ ಹೇಳಿದ್ಲು....." ನೀ ಏನೋ ಬಹಳ ಆರಾಮಿದ್ದಿ ಅಂತ ತಿಳಕೊಂಡಿ ಆದ್ರ ಅದು ಖರೇ ಅಲ್ಲ ..ನೀ ಒಂದು ಮುಖವಾಡ
ಹಾಕ್ಕೊಂಡಿ ನಿನ್ನ ಸುತ್ತಲೂ ಗಂಡ,ಮಗಳು , ಸಂಸಾರದ ಬೇಲಿ ಅದ. ಆ ಪಂಜರದಾಗ ನೀನಿದ್ದಿ ಒಂದು ಸಲ ಇದನ್ನು ಬಿಟ್ಟು
ಬ್ಯಾರೇ ಜಗತ್ತೂ ಅದ ಅಂತ ನೀ ವಿಚಾರ ಮಾಡೇ ಇಲ್ಲ ಅಲ್ಲ ?"
ಅವಳ ಮಾತು ನನಗೆ ಸರಿ ಅನಿಸಲಿಲ್ಲ ಅಥವಾ ಅವಳ ನೇರನುಡಿ ನನ್ನೊಳಗೆ ಅದುವರೆಗೂ ಸುಪ್ತವಾಗಿದ್ದ ಭಾವನೆಗಳನ್ನು
ಕೆದಕಿತೋ ಹೇಗೆ ಈ ತಳಮಳ ಮನದ ಮೂಲೆಯಲ್ಲಿ ಎಲ್ಲೋ ಇತ್ತು ದೀಪಾ ಯಾಕೆ ಅದನ್ನು ಎಬ್ಬಿ ತೆಗೆದ್ಲು......
------------೦-----------೦--------------೦------------೦
ಕಾಲೇಜಿನಲ್ಲಿ ನಾ ಬಹಳ ಹಿಂಜರಿಕೆ ಉಳ್ಳ ಹುಡುಗಿ ಒಬ್ಬ ಹುಡುಗ ಚುಡಾಯಿಸಿದಾಗ ಅಳುತ್ತ ಕುಳಿತವಳನ್ನು ನೋಡಿ ನಕ್ಕವರೇ ಬಹಳ ಜನ. ಆದರೆ ದೀಪಾ ಮುಂದಾದಳು ಆ ಹುಡುಗನಿಗೆ ದಬಾಯಿಸಿದಳು...ಅಷ್ಟೇ ಅಲ್ಲ
ಪ್ರಿನ್ಸಿಪಾಲ್ ಮುಂದೆ ಅವ ಕ್ಷಮೆ ಕೇಳುವ ಹಾಗೆ ಮಾಡಿದ್ಲು. ಸ್ವಭಾವದಲ್ಲಿ ಇಬ್ಬರೂ ತದ್ವಿರುದ್ಧ ಆದರೂ ನಾವು ಹತ್ತಿರದ
ಗೆಳತಿಯರಾದೆವು.ಅವಳ ಬಳಿ ದುಡ್ಡಿತ್ತು ಧಾರಾಳವಾಗಿ ಖರ್ಚು ಮಾಡುತ್ತಿದ್ದಳು.ಅವಳ ತಾಯಿ ಬಹಳ ಮೊದಲೇ ತೀರಿಕೊಂಡಿದ್ದರು.. ತಂದೆ ರಾಜಕಾರಣಿ... ಹಾಸ್ಟೆಲ್ ನಲ್ಲಿ ಇದ್ದಳು.ಆಗೀಗ ನಮ್ಮ ಮನೆಗೆ ಊಟಕ್ಕೆ ಬರುತ್ತಿದ್ದಳು.ನನ್ನ ತಂದೆ ತಾಯಿಗೆ ಅವಳ ಹಾಗೂ ನನ್ನ ಸ್ನೇಹ ಅಷ್ಟು ಸೇರಿರಲಿಲ್ಲ. ಮುಖ್ಯವಾಗಿ ಅವಳ ತಂದೆಯ ವೈಯುಕ್ತಿಕ ಬದುಕು ಇದಕ್ಕೆ
ಕಾರಣ ವಾಗಿತ್ತು. ದಾವಣಗೆರೆಯಲ್ಲಿ ಅವರು ಯಾರೋ ಹೆಂಗಸನ್ನು ಇಟ್ಟುಕೊಂಡಿದ್ದು ಆಗಿನ ಪತ್ರಿಕೆಗಳಲ್ಲಿ ರಂಗುರಂಗಾಗಿ
ವರದಿಯಾಗಿತ್ತು. ಅವಳ ಜತೆ ಅನೇಕ ಬಾರಿ ಕೇಳಿದ್ದೆ ಅವಳ ಮುಖ ಸಣ್ಣದಾಗಿತ್ತು .. ಮುಂದೆ ಕೆಲವೇ ನಿಮಿಷ ಮತ್ತೇ ಅದೇ ಹಳೆ ದೀಪಾ...ಎದುರಾಗುತ್ತಿದ್ದಳು. ಅವಳು ವಾದಿಸುತ್ತಿದ್ದಳು----
"ನೋಡು ವಿಜಿ ನೀ ವಿಚಾರ ಮಾಡು ನನ್ನ ಅಪ್ಪ ಅನಿಸ್ಕೊಂಡವ ತನ್ನ ಚಟಕ್ಕ ಯಾರನ್ನೋ ಇಟಗೊಂಡ್ರ ಅದರಾಗ ನಂದೇನು ತಪ್ಪು ನನಗ ಅವನ ಹೆಸರು ಸಿಕ್ಕದ ಬೇಕಾದಾಗೆಲ್ಲ ರೊಕ್ಕ ಕಳಸ್ತಾನ.. ಆದ್ರ ಅವನ ಭಾನಗಡಿ ನಂಗೂ ಇರಿಸುಮಿರಿಸು ಆದ್ರೇನು ನಾ ಏನು ಮಾಡಲಿ ನನ್ಮುಂದ ಯಾವ ಚಾಯ್ಸ ಇಲ್ಲ...."
ಅವಳ ವಾದಸರಣಿ ಪೂರ್ತಿಯಾಗಿ ನಾ ಒಪ್ಪಿರಲಿಲ್ಲ ಬಹುಷಃ ನನ್ನ ಮ್ಯಾಲ ನನ್ನ ತಂದೆ ತಾಯಿ ಪ್ರಭಾವ ಇತ್ತು ಕಾಣಸ್ತದ.
ಕಾಲಚಕ್ರ ಉರಿಳಿತು..ಡಿಗ್ರಿ ಮುಗಿಸಿ ಮನೆಯಲ್ಲಿದ್ದೆ ತಂದೆ ತಾಯಿ ನನ್ನ ಮದುವೆ ಪ್ರಯತ್ನ ಜೋರಾಗಿ ಮಾಡುತ್ತಿದ್ದರು. ವರಮಹಾಶಯರು ಬಂದು ಹೋಗುತ್ತಿದ್ದರು.ಇವರು ಮೆಚ್ಚಿಕೊಂಡಿದ್ದರು. ಗ್ರಾಮೀಣ ಬ್ಯಾಂಕಿನಲ್ಲಿ ಅಧಿಕಾರಿ ಮದುವೆ ಮೊದಲಿನಲ್ಲಿ ಹಳ್ಳಿ ವಾಸ...ಮಜ ಇತ್ತು.ಇವರು ಹಟ ಹಿಡಿದಿದ್ದರು ನಾನೂ ಕೆಲಸಕ್ಕೆ ಸೇರಲು ...ಅವರ ಒತ್ತಾಯಕ್ಕೆ ಹುಬ್ಬಳ್ಳಿಯ ಮಹಿಳಾ ಸಹಕಾರಿ ಬ್ಯಾಂಕಿನಲ್ಲಿ ಅರ್ಜಿ ಹಾಕಿದೆ. ಕೆಲಸ ಸಿಕ್ಕಿತು...ನಾದಿನಿಯ ಮದುವೆ, ಸುಜನಾಳ ಜನನ, ಹುಬ್ಬಳ್ಳಿಯಲ್ಲಿ ಹೊಸ ಮನೆ ಖರೀದಿ..ಹೀಗೆ ಕಾಲ ಪ್ರವಾಹದಂದದಿ ಸಾಗಿತ್ತು.ಅತ್ತೆಯ ಅನಾರೋಗ್ಯ , ಮನೆ ಸಾಲದಕಂತು.
ಸುಜನಾಳ ಹೋಮ್ ವರ್ಕ ಹೀಗೆ ನನ್ನ ಜೀವನದಲ್ಲಿ ಹೊಸ ಪ್ರಯಾರಿಟಿ ತೆರೆದುಕೊಂಡವು. ವಾರಕ್ಕೊಮ್ಮೆ ಬಂದು ಹೋಗುವ ಇವರು ..ಜೀವನ ಸಾಗಿತ್ತು.
ಕೌಂಟರ್ ಹೊರಗಡೆ ಪರಿಚಿತ ಧ್ವನಿ ಕೇಳಿದಾಗ ತಲೆ ಎತ್ತಿದ್ದೆ...ದೀಪಾ ಗಾಗಲ್ ತೆಗೆದು ನಗುತ್ತಿದ್ದಳು. ಬಹಳೆ ಬದಲಾಗಿದ್ದಾಳೆ
ಅನಿಸಿತು ಜೀನ್ಸ್ ಮೇಲೆ ಹಳದಿ ಬಣ್ಣದ ಟೀ ಶರ್ಟು ,ಢಾಳಾದ ಮೇಕಪ್ಪು, ದುಬಾರಿ ಸೆಂಟು ಎಲ್ಲ ಇಲ್ಲಿಯೇ ನೋಡುತ್ತಿದ್ದಾರೆ
ಎನ್ನಿಸಿ ಕಸಿವಿಸಿ ಯಾಯಿತು. ಸಾಲದ್ದಕ್ಕೆ ಅವಳು ನನ್ನ ಅಪ್ಪಿಕೊಂಡಾಗ ಅವಳ ಸುಗಂಧ ನನ್ನಲ್ಲು ವ್ಯಾಪಿಸಿದಂಗಾಯಿತು.
ಶನಿವಾರ ಆದ್ದರಿಂರ ಮ್ಯಾನೆಜರ್ ಗೆ ಹೇಳಿ ಅವಳ ಜೊತೆ ಹೊರನಡೆದೆ.....
-----------------೦--------------------೦-----------------------೦
ಮಧ್ಯಾಹ್ನದ ಬಿರುಬಿಸಿಲಲ್ಲಿ ಅದುವರೆಗೂ ಕಾಲೇ ಇಟ್ಟಿರದಿದ್ದ ಹೊಟೆಲ್ ನ ಎಸಿ ರೂಮ್ ನಲ್ಲಿ ದೀಪಾಳ ಎದಿರು ಕುಳಿತಿದ್ದೆ. ಅವಳು ಬೀರ್ ಮಗ್ ತುಟಿಗೆ ತಾಕಿಸಿ
ಕುಳಿತಿದ್ದಳು. ಸರಿಸುಮಾರು ಹತ್ತು ವರ್ಷಗಳ ನಂತರ ಭೇಟಿ ಗುರುತು ಸಿಗದಷ್ಟು ಬದಲಾಗಿದ್ದಳು. ಬೊಜ್ಜು ಬೆಳೆದು ದೇಹ ಊದಿಕೊಂಡಿತ್ತು ..ಢಾಳಾದ ಮೇಕಪ್ಪು ಅದ
ಮರೆಸುವ ಬದಲು ಮೆರೆಸಿತ್ತು. ಮಾತು ಶುರು ಮಾಡಿದ್ದು ಅವಳೆ....
" ಏನು ವಿಜಿ ಎಲ್ಲಾ ಠೀಕ ಅದನ ಗಂಡ,ಸಂಸಾರ, ಮಗಳು ಅಲ್ಲ ಹೆಂಗ ತಡ್ಕೊತಿ ನಿನ್ನ ಗಂಡ ವಾರಗಟ್ಲೆ ಇರೂದಿಲ್ಲ ಹಸಿವಿ ಅನಸೂದಿಲ್ಲೇನು?" ಅವಳ ಕಣ್ಣು
ಮಿನುಗುತ್ತಿದ್ದವು.
"ಹಂಗೇನಿಲ್ಲ ಈಗ ಮಗಳು ದೊಡ್ಡಾಕಿ ಆದ್ಲು ಮೊದಲಿನಂಗೂ ಈಗೂ ಹೆಂಗ್ ಇರಲಿಕ್ಕೆ ಆಗ್ತದ......"
"ಏನು ಮಹಾ ನಿಂಗ ವಯಸ್ಸಾಗ್ಯಾವ ..ಪ್ರದೀಪ ಎಲ್ಲರೇ ಊರಿಗೆ ಹೋಗಿದ್ದ ಅಂದ್ರ ನಾ ಬಹಳ ತ್ರಾಸ ತಗೊತೀನಿ...."ಅವಳು ನಿರ್ಭಿಡೆಯಾಗಿ ಮಾತನಾಡುತ್ತಿದ್ದಳು.
ನಿಧಾನವಾಗಿ ಅವಳಿಗೆ ಅಮಲು ಏರುತ್ತಿದೆ ಅನಿಸಿತು.
"ಮುಂದಿನ ಜೀವನದ ಬಗ್ಗೆ ಏನು ವಿಚಾರ ಮಾಡಿ...ಕಲ್ಪನಾ ಛಲೋನ ಮಾಡಿಕೊಂಡಿರಬೇಕು...."
" ಬಂಗಾರದಂಥ ಮಗಳಿದ್ದಾಳ ಸ್ವಂತ ಮನಿ ಅದ ಜಾಬ್ ಛಲೋ ನಡದದ...."ಯಾಕೋ ನನ್ನ ಧ್ವನಿ ಕಂಪಿಸುತ್ತಿದೆ ಅನಿಸಿತು.
" ಹುಂ ಎಲ್ಲ ಛಲೋ ಅನಿಸ್ತದ ಅಲ್ಲ ನಿನ್ನ ಪಗಾರದಾಗ ಮನಿ ಸಾಲದ ಕಂತು ತುಂಬತಿ , ಮಗಳ ಫೀಸು, ನಿಮ್ಮ ಅತ್ತಿ ಔಷಧಾ ಎಲ್ಲಾ ಮುಗದ ಮ್ಯಾಲ ಏನರೇ
ಉಳದ್ರ ಒಂದೆರಡು ಸೀರಿ ತಗೋತಿ ಕೆಲವೊಮ್ಮೆ ಗಂಡನ ಮುಂದ ಕೈ ಚಾಚತಿ ಅವಾ ಬೈದು ದುಡ್ಡು ಕೊಡತಾನ ಸುಮ್ಮನ ಅನಿಸ್ಕೊತಿ ಅಲ್ಲ..?"
ಅವಳು ಸಹಜವಾಗಿಯೇ ಕೇಳಿದ್ಲು ಆದ್ರ ಯಾಕೋ ಭರ್ಚಿ ಚುಚ್ಚಿದಂಗಾತು.ನನ್ನ ಸುಪ್ತ ಮನಸಿನಲ್ಲಿ ಈ ಭಾವನೆ ಇದ್ದಿರಬೇಕು ದೀಪಾ ಅದನ್ನು ಎಬ್ಬಿ ತೆಗೆಯುತ್ತಿದ್ದಾಳೆ...ಮನಸ್ಸಿಗೆ ಕಿರಿಕಿರಿಅನ್ನಿಸತೊಡಗಿತು. ನನ್ನ ಭಾವನೆಗಳಿಗೆ ಅವಳು ಕನ್ನಡಿ ಹಿಡಿಯುತ್ತಿದ್ದಾಳೆ ಅಂತ ಏಕೆ ಅನಿಸಬೇಕು..ನಾನು ಅಂದುಕೊಂಡಿದ್ದೆ ಈ ಸಂಸಾರ ತಾಪತ್ರಯದಾಗ ನಾ ಎಲ್ಲೊ ಕಳೆದು
ಹೋಗೇನಿ ಅಂತ...ಮುಂದಿನ ಜೀವನದ್ ಬಗ್ಗೆ ನೂರೆಂಟು ಕನಸು ಇಟ್ಟುಕೊಂಡು ನಾ ಹೊಸಿಲು ತುಳಿದಿದ್ದೆ.. ಎಲ್ಲಾ ಆಶಾ
ಪೂರೈಸ್ಯಾವ ಅಂತ ಹೇಳುವ ಹಾಗಿಲ್ಲ ಒಂದೊಂದ ಸಲ ಅನಸ್ತದ ನಾ ದುಡಿತಿರುವುದು ನನಗಾಗಿ ಅಲ್ಲ ಬೇರೆ ಯಾರದೋ
ಕನಸು ಪೂರೈಸಲು ನಾ ದುಡಿಯಬೇಕಾಗಿದೆ....ಈ ಬದುಕು ನನ್ನದಲ್ಲ ಬ್ಯಾರೆ ಯಾರದೋ ಬದುಕ ನಾ ಕಟ್ಟಿಕೊಡುತ್ತಿರುವೆ...
ಅತೃಪ್ತಿ ಸದಾ ಹಿಂದೆಯೇ ಇದೆ....
" ಸ್ವಲ್ಪ ವೈನ್ ತಗೋತಿ ಏನು..."ಅವಳ ಪ್ರಶ್ನೆ ಮೊದಲು ಅರ್ಥ ವಾಗಲಿಲ್ಲ.....ವಿಚಿತ್ರ ಧೈರ್ಯ ಬಂತು ಗೋಣು ಅಲ್ಲಾಡಿಸಿದೆ..
ಮೊದಲು ರುಚಿ ಗೊತ್ತಾಗಲಿಲ್ಲ ಕೋಕ್ ಬೇರೆ ಬೆರೆಸಿದ್ಲು...ಒಂಥರಾ ಒಗರು ವಾಸನೆ..ಹಿಂಗ ಅಂಥ ಹೇಳಲಾರದ ರುಚಿ....
"ನಿನ್ನ ಜೀವನ ಹೆಂಗ ಅದ ಮಗ ಬೋರ್ಡಿಂಗ್ ನ್ಯಾಗ ಇದ್ದಾನ ಅಂದಿ....ಭೇಟಿ ಅಪರೂಪ ಇರಬೇಕು...ನಿಮ್ಮ ಮನಿಯವರ
ಬಿಸಿನೆಸ್ ಹೆಂಗ್ ಅದ...." ಅವಳನ್ನು ಮಾತಿಗೆ ಎಳೆದೆ.... ಹೇಳುತ್ತಲೆ ಹೋದಳು ತನ್ನ ಮದಿವೆಯಬಗ್ಗೆ,. ದಾಂಪತ್ಯದ ಬಗ್ಗೆ,
ಎದುರಿಗಿದ್ದವಳು ಮುಜುಗರಗೊಂಡಾಳು ಎಂಬ ಕಾಳಜಿ ಅವಳಲ್ಲಿರಲಿಲ್ಲ. ನಿರ್ಭಿಡೆತನ ಅವಳಿಂದ ಇನ್ನೂ ದೂರಾದಹಾಗಿರಲಿಲ್ಲ. ಮಾತು ಸಹಜವಾಗಿ ಹೊಮ್ಮುತ್ತಿತ್ತು.....
" ನೋಡು ವಿಜಿ ನಾವು ಹೆಂಗಸರು ಪಾಪದವ್ರು..ಈ ಗಂಡಸ್ರಿಗೆ ನಾವೆಲ್ಲ ಬರೀ ಸಾಧನೆಯ ಸಾಮಾನುಗಳು..ಹೊಸದಾಗಿ ನಂಗೂ ಅನಿಸಿತ್ತು ಜಗತ್ತು ನನ್ನ ಕೈಯಾಗ ಅದ..ಆದ್ರ ಕೈಯಾಗ ಬರೇ ಉಸುಕಿತ್ತು ಮುಷ್ಟಿ ಬಿಚ್ಚಿದ್ರ ಏನೂ ಇಲ್ಲ....ಪ್ರದೀಪನೂ
ಎಲ್ಲಾರಂಗನ ಅಪ್ಪನ ವಶೀಲಿ ಬೇಕಾಗಿತ್ತು ಭರಪೂರ ಫಾಯದಾ ಮಾಡಿಕೊಂಡ ದಿನಾ ಹೋದಂಗ ನನ್ನ ದೇಹ ಅವಗ
ಬ್ಯಾಸರಿಕಿ ತಂತು...ಹೊರಗ ಹೆಜ್ಜಿ ಇಟ್ಟ...ನೇರವಾಗಿ ಹೇಳಿದ..ಡೈವೋರ್ಸ ದೊಡ್ಡ ವಿಷಯ ಅಲ್ಲ ಹೊರಗ ಹೋದ್ರ ಇನ್ನೊಬ್ಬ
ಪ್ರದೀಪ ಸಿಗೂದಿಲ್ಲ ಅಂತ ಯಾವ ಗ್ಯಾರಂಟಿ.. ನನಗೂ ಛಲ ಬಂತು ನಮ್ಮ ಅಪ್ಪನ ಪಾರ್ಟಿ ಮೀಟಿಂಗ್ ಹೊಂಟೆ...ಹೊಸಾ
ಜನ ಸಿಕ್ರು ಕೆಲವರ ವೇವ್ ಲೆಂಗ್ತ ಸರಿ ಹೊಂತು ಮುಂದುವರೆದೆ...ಪ್ರದೀಪ ನಿರುತ್ತರ ಆಗಿದ್ದ..ನಾ ಏನೋ ಸಾದಿಸಿದ ಹೆಮ್ಮೆಯಲ್ಲಿ ಬೀಗಿದೆ...ಮಗನ ಮುಂದೆ ಸರಿಅಲ್ಲ ಅಂತ ಅವನಿಗೆ ಬೋರ್ಡಿಂಗನ್ಯಾಗ ಬಿಟ್ಟೆ.........ಅತೃಪ್ತಿ ಮಾತ್ರ ಬೆನ್ನಿಗಂಟಿಕೊಂಡೇ ಅದ..."........
---------------೦-------------------------೦------------------------೦--------------------------
೨
-----
ಮುಂಜಾನೆ ಎದ್ದಾಗ ತಲೆ ಜಡವಾಗಿತ್ತು...ಚಹಾದ ಬದಲು ಬಿಸಿನೀರಿನ ಪಾನಕ ಮಾಡಿಕೊಂಡು ಕುಡಿದೆ..
ಇವರು ಸ್ಕೂಟರ್ ಬಿಚ್ಚಿಕೊಂಡು ಕುಳಿತಿದ್ದರು.. ಅತ್ತೆ ಯವರ ಗೆಳತಿಯ ಮೊಮ್ಮಗನ ಮುಂಜಿವೆ ಇತ್ತು ಸುಜನಳನ್ನು ಜತೆಗೆ
ಕರೆದೊಯ್ಯುವವರಿದ್ದರು. ಅರಿವೆ ವಾಶಿಂಗ್ಗೆ ಹಾಕಿ ಹಾಲ್ ಗೆ ಬಂದೆ. ರಿಪೇರಿಮುಗಿಸಿದ ಇವರು ಪೇಪರ್ ತಿರುವಿ ಹಾಕುತ್ತಿದ್ದರು.
ಸುಜನ ಅಜ್ಜಿಯ ಜೊತೆ ಸಂಭ್ರಮದಿಂದ ಹೊರನಡೆದಳು.
"ನಿನ್ನೆ ನನ್ನೊಳಗ ಏನಾದರೂ ಫರಕು ಆತು ಅಂತ ನಿಮಗ ಅನಿಸಲಿಲ್ಲೇನು...." ಪ್ರಶ್ನೆಗೆ ಗಲಿಬಿಲಿ ಗೊಂಡರೂ
ಶಾಂತವಾಗಿ ಉತ್ತರಿಸಿದರು.
"ನಿನ್ನೆ ನಿನ್ನ ಹಳೆ ಗೆಳತಿ ಸಿಕ್ಲು ಅಂತ ಹೇಳಿದ್ಯಲ್ಲ ಗೆಳತ್ಯಾರು ಬಹಳ ದಿನಗಳಿಂದ ಸಿಕ್ಕಿರಿ ಏನೋ ವಿಷೇಶ
ಇರಬೇಕು ಅಂದ್ಕೊಂಡೆ...ಹೇಳು ಏನಾತು...."
ಹೇಳಲೋ ಬೇಡವೋ ಎಂಬ ಅನುಮಾನದ ಹಿಂದೆ ನುಗ್ಗಿ ಬಂದದ್ದು ಹುಚ್ಚು ಧೈರ್ಯ.ಎಲ್ಲ ಹೇಳಿದೆ ದೀಪಾ ಆಡಿದ ಮಾತಿನ ಬಗ್ಗೆ , ನನ್ನ ಜೀವನದ ಬಗೆಗಿನ ಅವಳ ಕಾಮೆಂಟಗಳು ಯಾವುದನ್ನೂ ಮುಚ್ಚಿಡದೇ ಹೇಳಿದೆ. ವೈನ್ ಸೇವಿಸಿದ್ದು
ಸಹ ಮುಚ್ಚಿಡಲಿಲ್ಲ. ನಿರಾಳ ವಾಯಿತು. ಗಲ್ಲಕ್ಕೆ ಕೈ ಆನಿಸಿ ಇವರು ಕೇಳಿಸಿಕೊಳ್ಳುತ್ತಿದ್ದರು. ಮೌನ ಹೆಪ್ಪುಗಟ್ಟಿತ್ತು.ಇವರು ಒಂದು ವೇಳೆ ಸಿಟ್ಟಿಗೆದ್ದು ಕೂಗಾಡಿದರೆ ನಾನೂ ಸುಮ್ಮನಿರಬಾರದು ..ಅತೃಪ್ತಿ ಇದೆ ನಾ ಜೀವಿಸುತ್ತಿರುವ ಈ ಜೀವನದ ಬಗ್ಗೆ ದುಡಿಯುವ
ಯಂತ್ರ ವಾಗಿ ಮಾರ್ಪಡುತ್ತಿರುವೆ...ನನ್ನ ಅಸ್ತಿತ್ವ ಏನು ನೂರೆಂಟು ವಿಚಾರಗಳು... ಜಿಗುಪ್ಸೆ ಬರುತ್ತಿದೆ ನನ್ನ ಮೇಲೆಯೆ ನನಗೆ..
"ನೋಡು ವಿಜಿ ನಿನ್ನೆ ನೀ ವೈನ ಕುಡಿದಿ ಅದು ನನಗ ಮುಖ್ಯ ಅನಿಸೂದಿಲ್ಲ . ನಾನೂ ಇದರ ಬಗ್ಗೆ ವಿಚಾರ ಮಾಡತೇನಿ ಯಾವಾಗರ ನಮ್ಮದು ಒಂದು ಸಂಸಾರೇನು ನಿನಗ ಗೊತ್ತದ ನನ್ನ ಅಪ್ಪ ಯಾವ ಆಸ್ತಿನೂ ಮಾಡಿ ಹೋಗಿರಲಿಲ್ಲ.. ತಂಗಿ
ಮದವಿ ಜವಾಬ್ಡಾರಿ ಈ ಮನಿ ಸಾಲ ಸುಜನಳ ಭವಿಷ್ಯ ಎಲ್ಲಾ ಎದುರಿಗೆ ಕುಣಿತಾವ. ನಾ ಅಸಹಾಯಕನಿದ್ದೇನಿ ನಿನ್ನ ಪಗಾರದಿಂದ ಸಾಲದ ಕಂತು,ಮನಿ ಖರ್ಚು ನಡೀತದ. ನನ್ನ ಪಗಾರ ಮಗಳ ಮುಂದಿನ ಭವಿಷ್ಯಕ್ಕ ಉಪಯೋಗ ಆಗ್ತದ
ನಾವು ಈಗ ಸ್ವಲ್ಪ ತ್ಯಾಗ ಮಾಡಲೆ ಬೇಕಾಗೇದ....."
ಇವರು ಹೇಳುತ್ತಲೇ ಇದ್ದರು.ಮಾತು ಸಹಜವಾಗಿರಲಿಲ್ಲ ಮಠದಲ್ಲಿ ಸ್ವಾಮಿಗಳು ಉಪದೇಶ ಕೊಡುವಹಾಗಿತ್ತು. ಅವರಲ್ಲೂ
ತಳಮಳ ಇದೆ ಬದುಕುತ್ತಿರುವ ರೀತಿಯ ಬಗ್ಗೆ ಅಸಹನೆ ಇದೆ ಆದರೆ ಬಾಯಿಂದ ಮಾತ್ರ ಉಪದೇಶ ಬರುತ್ತಿದೆ... ದೀಪಾಳ
ಮಾತು ಮತ್ತೆ ನೆನಪಗುತ್ತಿದೆ ನಿಜಕ್ಕೂ ನಾ ಒಂದು ವ್ಯೂಹದಲ್ಲಿ ಸಿಕ್ಕಿ ಹಾಕಿಕೊಂಡಿರುವೆ.. ಯಾಕೋ ಇದರಿಂದ ಬಿಡುಗಡೆ ಇಲ್ಲ
ಎಂಬ ನಂಬಿಕೆ ಬಲವಾಗತೊಡಗಿದೆ...
------------೦-----------------೦-----------------------೦----------------------
ರಾತ್ರಿ ಸುಜನ ಪಕ್ಕಕ್ಕೆ ಮಲಗಿದ್ದಳು ಇವರು ಸಾಯಂಕಾಲವೇ ಚಿಕ್ಕೋಡಿ ಬಸ್ ಹತ್ತಿದ್ದರು.ಕೈಯಲ್ಲಿ ಪುಸ್ತಕ
ಇತ್ತಾದರೂ ಮನಸ್ಸು ಎಲ್ಲೋ ಓಡುತ್ತಿತ್ತು..ನನ್ನ ಬದುಕು ನನ್ನದಾಗುವುದು ಯಾವಾಗ ಈ ದಿಗಿಲು ಕಾಡುತ್ತಿತ್ತು. ಬೇರೆಯವರೇನಲ್ಲ ಆದರೂ ನಾ ಕೇವಲ ಸಂಬಳ ಎಣಿಸುವವಳೆ ಹಾಗಾದರೆ...ಇನ್ನೊಬ್ಬರ ಸಲುವಾಗಿ ದುಡಿಯುವುದೇ ಆಯಿತೆ
ಈ ಬಾಳು... ದೀಪಾಳ ಹಾಗೆ ನಾ ಎಂದೂ ಬಿಂದಾಸ್ ಆಗಿ ಇರಲಾರೆನೆ . ಅಥವಾ ನಿನ್ನೆ ಅವಳು ನನಗೆ ಭೇಟಿ ಆಗದೆ ಇದ್ರೆ
ನಾ ಹೀಗೆಲ್ಲ ವಿಚಾರ ಮಾಡುತ್ತಲೆ ಇರಲಿಲ್ಲವೇನೋ....ವಿಚಾರ ಮಾಡಿದಂತೆಲ್ಲ ಈ ಅನಿಸಿಕೆ ಬಲವಾಯಿತು.. ಆದರೆ ನಾ
ವೈನ್ ಏಕೆ ಕುಡಿದೆ ಎಲ್ಲೋ ಮನಸಿನಲ್ಲಿ ನಾ ದೀಪಾಳ ಮುಂದೆ ಸೋಲಬಾರದು ಗೌಣವಾಗಬಾರದು ಈ ಅನಿಸಿಕೆ ಹಾಗೆ
ಪ್ರೇರೆಪಿಸಿತೋ ಗೊತ್ತಿಲ್ಲ ಅಥವಾ ಯಾರೋ ಬಂದು ಕೈ ತೋರಿಸಿ ನನ್ನ ಒಳಗನ್ನು ಈ ರೀತಿ ಬೆತ್ತಲು ಮಾಡಿದ್ದಕ್ಕೆ ಹತಾಶೆಯ
ಪ್ರತಿಕ್ರಿಯೆಯೋ ಗೊತ್ತಿಲ್ಲ....
ಬೆಳಿಗ್ಗೆ ಎದ್ದಾಗ ತಲೆ ಭಾರ ಆಗಿತ್ತು. ಬ್ಯಾಂಕಿಗೆ ರಜ ಹೇಳಿದವಳು ಮತ್ತೆ ರೂಮ್ ಸೇರಿ ಮಲಗಿದೆ.. ತಲೆ
ನೋವಿನಿಂದ ಸಿಡಿಯುತ್ತಿತ್ತು....ಎಷ್ಟು ಹೊತ್ತು ಮಲಗಿದ್ದೇನೋ ಗೊತ್ತಿಲ್ಲ ಮೊಬೈಲ್ ಕರೆದಾಗ ಅತ್ತಲಿಂದ ತೇಲಿಬಂದ
ಇವರ ದನಿಯಲ್ಲಿ ಉತ್ಸಾಹ ಇತ್ತು..ತಮಗೆ ಪ್ರಮೋಶನ್ ಸಿಕ್ಕಿದ್ದರ ಬಗ್ಗೆ ಹೇಳುತ್ತಿದ್ದರು.. ನಾನೂ ಉತ್ಸಾಹ ತೋರಿಸುವ
ಪ್ರಯತ್ನ ಮಾಡಿದೆ..ಗೋಡೆಯ ಕೆಲೆಂಡರ್ ರವಿವಾರ ಬರಲು ಐದು ದಿನ ಇದೆ ಎಂದು ಅಣಕಿಸುತ್ತಿತ್ತು....
ಭಾರತದೇಶದಲ್ಲಿದ್ದ ವಿವಿಧ ಸಮುದಾಯಗಳು ಹಾಗು ಭಾರತೀಯ ಸಂಸ್ಕೃತಿ
8 ತಿಂಗಳುಗಳ ಹಿಂದೆ
ಊಪ್ಸ್... ಏನ್ರಿ ಉಮೇಶ್ರವರೆ, ನೀವ್ ಈ ನಮೂನೆನಾಗೂ ಯೋಚಿಸ್ಬಲ್ರಿ ಅಂತ ಗೊತ್ತಿರ್ಲಿಲ್ಲ.. ಭಾಳ್ ಚಲೋ ಅದ. ಹೆಣ್ಣು ಒಂದ್ ಮಧ್ಯಮ ವರ್ಗದ ಕುಟುಂಬದಾಗ ಹ್ಯಾಂಗ ತನ್ನದೂ ಅನ್ನೋದೆಲ್ಲ ಬಿಟ್ಟು ತನ್ನವ್ರನ್ನ ಚಲೋ ಇಡ್ಲಿಕ್ಕ ಕಟ್ಟಿ ತರಃ ದುಡಿತಾಳ ಅನೂದ ಚಂದ್ ಹೇಳಿರಿ. Actually, ದುಡಿಯೋ ಹೆಂಗಸರ್ಗೆ ಏಕಾಂತ ಮರೀಚಿಕೆ ಆದ್ರ ಸೆಕ್ಸ್ ಅನ್ನೋದು ಹೆಚ್ ಸಮಯ ಹಿಂಸೆ ಅನ್ನಿಸ್ತದ.. ನಯ ನಾಜೂಕು ಭಾವನೆ ತಿಳೀದ್ ಗಂಡ, ನೆಲೇನೋ ಅಂತ ಕಾದ್ ಕೂರೊಂಗೆ ಮಾಡೋ Problems.. ಅವಳನ್ನ ಹಿಂಡಿ ಹಿಪ್ಪೆ ಮಾಡುತ್ವೆ.
ಪ್ರತ್ಯುತ್ತರಅಳಿಸಿThanks for such a nice and Wonderfull article..
ಬರಿತಾ ಇರಿ
ನಿಮ್ಮ
ಅವೀನ್
ಅವೀನ ಪ್ರತಿಕ್ರಿಯೆಗೆ ಧನ್ಯವಾದಗಳು......!
ಪ್ರತ್ಯುತ್ತರಅಳಿಸಿಮಧ್ಯಮ ವರ್ಗದ ಹೆಣ್ಣಿನ ತಳಮಳ ಬಹಳ ಚೆನ್ನಾಗಿ ಬರೆದಿದ್ದೀರಾ ಅಭಿನಂದನೆಗಳು
ಪ್ರತ್ಯುತ್ತರಅಳಿಸಿಉಮೇಶ್ ಸಾರ್..
ಪ್ರತ್ಯುತ್ತರಅಳಿಸಿನಾನು ಈ ಕಥೆ ಈಗ ತಾನೆ ಓದಿದೆ. ತುಂಬಾ ಚೆನ್ನಾಗಿದೆ. ನಿಜವಾಗಲು ಎಲ್ಲ ಹೆಣ್ಣು ಮಕ್ಕಳ ಮನದಲ್ಲೂ ಮೂಡುವ ಗೊಂದಲವೇ ಇದು. ಆದರೆ ಇರುವ ಕೆಲಸವನ್ನೂ ಬಿಟ್ಟು, ಮನೆಯಲ್ಲಿ ಕುಳಿತರೆ ಪರಿಸ್ಥಿತಿ ಸುಧಾರಿಸುವ ಬದಲು ಇನ್ನೂ ಹದಗೆಡತ್ತೆ.. ತನಗೆ ಆಸಕ್ತಿಯಿರುವ ವಿಷಯಗಳಲ್ಲಿ ಮುಂದುವರೆಯುವ ಅದೃಷ್ಟ ಎಲ್ಲ ಹೆಣ್ಮಕ್ಕಳಿಗೂ ಎಲ್ಲಿ ಸಿಗತ್ತೆ?
ಶ್ಯಾಮಲ
ಅಶ್ರಫ್ ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು...
ಪ್ರತ್ಯುತ್ತರಅಳಿಸಿಶಾಮಲ ಮೇಡಂ ಪ್ರತಿಕ್ರಿಯೆಗೆ ಧನ್ಯವಾದಗಳು. ಎಷ್ಟೋಹೆಂಗಸರು ಈ ಜಗದ ಕುಹಕ ನಿಂದನೆಗಳಿಗೆ ಬಗ್ಗದೆ ದುಡಿದು ತಮ್ಮ
ಪ್ರತ್ಯುತ್ತರಅಳಿಸಿಸಂಸಾರರಥ ಸಾಗಿಸಲು ನೆರವಾಗುತ್ತಿದ್ದಾರೆ ಅವರಿಗೊಂದು ಸಲಾಮ್ ನೀವು ಹೇಳೋದು ಸರೀನೆ ಇದೆ....
ಕಥೆ ತುಂಬಾನೇ ಚೆನ್ನಾಗಿದೆ ಸರ್,
ಪ್ರತ್ಯುತ್ತರಅಳಿಸಿನಿಮ್ಮ ಯೋಚನಾ ಶೈಲಿ ಇಷ್ಟ ಆಯಿತು
ಕಥೆ ಓದಿಸ್ಕೊಂಡು ಹೋಗುತ್ತೆ
ಸಾಗರದಾಚೆಯ ಇಂಚರ ಮೆಚ್ಚಿ ಪ್ರತಿಕ್ರಿಯಿಸಿರುವಿರಿ ಧನ್ಯವಾದಗಳು
ಪ್ರತ್ಯುತ್ತರಅಳಿಸಿಆಗಾಗ ಬರತಾ ಇರ್ರಿ
ಉಮೇಶ್ ಸಾರ್...
ಪ್ರತ್ಯುತ್ತರಅಳಿಸಿಕಥೆ ಚೆನ್ನಾಗಿದೆ. ಹೀಗೇ ನನಗೆ ತಿಳಿದವರೊಬ್ಬರ ಜೀವನದಲ್ಲೂ ಆಗಿದೆ, ಆದರೆ ಆ ಹುಡುಗಿಗೆ ಸಾಕಿದ ಅಪ್ಪ ಅಮ್ಮನೇ ಹೇಳಿದ್ದಾರೆ.... ಹುಡುಗಿಗೆ ಇನ್ನೂ ಅವರ ಮನಸ್ಸಿನ ಸ್ಥಿತಿ ಅರ್ಥವೇ ಆಗಿಲ್ಲ... ಅವಳು ಇನ್ನೂ ಅಸಹಕಾರದಲ್ಲೇ ಕುಳಿತಿದ್ದಾಳೆ. ನನ್ನನ್ನು ಕಳಿಸಿಬಿಡಿ ಎಂಬ ರಾಗ ಹಾಡುತ್ತಲೇ ಇದ್ದಾಳೆ.... ಮುಂದೇನಾಗತ್ತೋ ಗೊತ್ತಿಲ್ಲ...
ಶ್ಯಾಮಲ
kathe chennaagide...
ಪ್ರತ್ಯುತ್ತರಅಳಿಸಿ