ಶುಕ್ರವಾರ, ಅಕ್ಟೋಬರ್ 16, 2009

ಕರಗಿದ ಮಂಜು

ಈ ಕತೆ ನಾನು ಬರೆದಿದ್ದು ೨೦೦೨-೦೩ ರ ಸುಮಾರು... .ಕರ್ಮವೀರದಲ್ಲಿ ಪ್ರಕಟವಾಗಿತ್ತು.ಪ್ರಸ್ತುತ ಕತೆಯ ಹಸ್ತಪ್ರತಿ
ಸಹ ನನ್ನಲ್ಲಿ ಉಳಿದಿಲ್ಲ.ಇನ್ನು ಕರ್ಮವೀರದ ಕಾಂಪ್ಲಿಮೆಂಟರಿ ಕಾಪಿಯಾರೋ ತಗೊಂಡು ಹೋಗಿದ್ದು ವಾಪಸ್ ಕೊಡಲಿಲ್ಲ.
ಈಗ ಈ ಕತೆ ನೆನಪಿನಾಳದಿಂದ ಹೆಕ್ಕಿ ಮತ್ತೆ ಬರೆದಿರುವೆ. ಕತೆಯ ಮೊದಲಭಾಗ ಇದೆ...ಮುಂದಿನ ಭಾಗಕ್ಕಾಗಿ ಕಾಯುವಿರಿ ತಾನೇ....


-------------------
== ೧ ==


ಸ್ಕೂಲ್ ವ್ಯಾನ್ ಬರುವುದನ್ನೇ ಕಾಯುತ್ತ ಗೇಟಿನಲ್ಲಿ ನಿಂತ ಸುರೇಖಳಿಗೆ ಅದು ಬಂದಾಗ ಅದರಿಮ್ದಿಳಿದ
ಮಗಳು ಯಾಕೋ ಸರಿಇಲ್ಲ ಅನಿಸಿತು. ಮನೆಗೆ ಬಂದ ಮಗಳು ಬ್ಯಾಗ್ ಬೀಸಿ ರೂಮ್ ಸೇರಿದಾಗ ದಿಗಿಲುಗೊಂಡಳು.ಎಂದೂ ಹೀಗೆ ವರ್ತಿಸದವಳು ಇಂದೇಕೆ ..ಇಂದಿನ ಪೇಪರ್ ಚೆನ್ನಾಗಿ ಮಾಡಿರಲಿಕ್ಕಿಲ್ಲ ..ಕೊನೆ ಪೇಪರ್ ಇವತ್ತು ಎಂದು ಬೆಳಿಗ್ಗೆ ಹಾರ‍ಾಡಿ ಹೋದವಳು
ಈಗ ಈ ರೀತಿ ಸಪ್ಪಾಗಿದ್ದಾಳೆ . ದಿಗಿಲಾಯಿತು ಸುರೇಖಳಿಗೆ. ತಾನೇ ಅವಳ ಬ್ಯಾಗ್ ಎತ್ತಿಟ್ಟು ರೂಮ್ ನಲ್ಲಿ ನೋಡಿದರೆ ಕಾಟ್ ಮೇಲೆ
ಬೋರಲಾಗಿ ಮಲಗಿದ ಮಗಳು ಬಿಕ್ಕಿ ಬಿಕ್ಕಿ ಅಳುತ್ತಿದ್ದಾಳೆ. ಗಾಬರಿಗೊಂಡು ಸುರೇಖ ಮಗಳ ಹತ್ರ ಹೋಗಿ ತಲೆಗೂದಲಲ್ಲಿ ಬೆರಳಾಡಿಸುತ್ತ ನಲ್ಮೆಯಿಂದ ಮುದ್ದುಗರೆದಳು. ಸಿಕ್ಕ ಪ್ರತಿಕ್ರಿಯೆ ಮಾತ್ರ ಸುರೇಖಳನ್ನು ಬೆಚ್ಚಿ ಬೀಳಿಸಿತು.

" ನೀವು ನನ್ನ ತಿಪ್ಪ್ಯಾಗಿಂದ ಎತ್ಕೊಂಡು ಬಂದೀರಿ ಹೌದಲ್ಲೊ ನಾ ನಿಮ್ಮ ಮಗಳಲ್ಲ ಅಲ್ಲ...." ಬಿಕ್ಕುವಿಕೆಯ ನಡುವೆಯೂ ದನಿ ಸ್ಪಷ್ಟವಾಗಿತ್ತು. ಸುಮನ್ ಕಂಪಿಸುತ್ತಿದ್ದಳು. ಅತ್ತು ಅತ್ತು ಕಣ್ಣು ಕೆಂಪಾಗಿದ್ದವು. ಮಗಳ ರೂಪ ಮೇಲಾಗಿ ಅವಳು
ಆಡಿದ ಮಾತು ಸುರೇಖಳನ್ನು ದಂಗಾಗಿಸಿತು.ಹತ್ತು ವರ್ಷ ಮುಚ್ಚಿಟ್ಟ ರಹಸ್ಯ ಹೀಗೆ ಹೊರಬೀಳಬಹುದು ಅದೂ ಮಗಳೇ ಹೀಗೆ
ಪ್ರಶ್ನೆಮಾಡಿಯಾಳು ಇದು ಅವಳು ಊಹಿಸಿರಲಿಲ್ಲ. ಗಂಡ ಸುರೇಶ ಈ ಬಗ್ಗೆ ಅನೇಕಬಾರಿ ಚರ್ಚಿಸಿದ್ದ. ನಿಜ ಏನು ಮಗಳಿಗೆ ಹೇಳಿ
ಬಿಡುವ ಅವನ ವಾದ ಸುರೇಖಳಿಗೆ ಸರಿ ಅನಿಸಿರಲಿಲ್ಲ. ತಾನು ಬಚ್ಚಿಟ್ಟುಕೊಂಡಿದ್ದು ತಪ್ಪಲ್ಲ ಇದು ಅವಳ ನಿಲುವು.
ಮಗಳು ಪ್ರಶ್ನೆಕೇಳಿ ಎದೆಮೇಲೆ ಈ ರೀತಿ ಪ್ರಹಾರ ಮಾಡಬಹುದೇ..

ಸುಮನ್ ಳನ್ನು ಬಾಚಿ ತಬ್ಬಿದವಳು ತಡೆಯಲಾರದೆ ಅಳಲು ಶುರುಮಾಡಿದಳು.ತಾಯಿಯಿಂದ ಕೊಸರಿ ಬಿಡಿಸಿಕೊಂಡ ಸುಮನ್ ದೂರ
ನಿಂತಳು. ಮಗಳ ಈ ಪ್ರತಿಕ್ರಿಯೆ ಸುರೇಖಳಿಗೆ ನೋವು ತಂತು.

"ರೂಪಾ ಎಲ್ಲ ಹೇಳಿದ್ಲು ಅಕಿ ಮನ್ಯಾಗ ನಿನ್ನೆ ಇದ್ನ ಮಾತಾಡತಿದ್ರಂತ.. ಇದು ಖರೆ ಅದ ಅಲ್ಲ...?"
ಮಗಳ ಪ್ರಶ್ನೆಗೆ ಸುರೇಖಳ ಬಳಿ ಉತ್ತರ ಇರಲಿಲ್ಲ.
-----------------೦-----------------------------೦-------------------------------೦-----------------------------------------------------

ಸುರೇಶ ಬ್ಯಾಂಕಿನಲ್ಲಿ ಅಧಿಕಾರಿ.ಹೆಂಡತಿಯಿಂದ ಫೋನ ಬಂದಾಗ ಅವಳ ದನಿ ಗಾಬರಿಯಿಂದ ಕೂಡಿದ್ದು
ಏನೋ ಹೇಳಹೊರಟವಳು ತಡವರಿಸುವದನ್ನು ಕಂಡವ ತಾ ಹೊರ‍ಟುಬರುವುದಾಗಿ ಹೇಳಿದ. ಬೈಕ್ ಮೇಲೆ ಹೊರಟಾಗಲೂ ಏನಾಗಿರಬಹುದು ಎಂಬ ಯೋಚನೆ ಆಗಿತ್ತು. ಮನೆ ತಲುಪಿದಾಗ ಹಾಲ್ ನಲ್ಲಿ ಆತಂಕದಿಂದ ಕುಳಿತ ಸುರೇಖ ಕಂಡಳು.
ಇವನನ್ನು ನೋಡಿದವಳು ಇವನ ಎದೆಗೊರಗಿ ಅಳಲಿಟ್ಟಾಗ ಗಾಬರಿಗೊಂಡ ಸುರೇಶನಿಗೆ ಕಾಣಿಸಿದ್ದು ಮಗಳ ಬ್ಯಾಗು ಅಂದರೆ
ಮಗಳು ಮನೆಯಲ್ಲಿದ್ದಾಳೆ ಹೆಂಡತಿಯ ಮುಖ ಎತ್ತಿ ಹಣೆಗೆ ಮುತ್ತು ನೀಡಿದವ ಏನಾಯಿತೆಂದು ಕೇಳಿದ. ಹೆಂಡತಿಯ ಅಳುವೇ ಉತ್ತರವಾಗಿತ್ತು.
ನಿಧಾನವಾಗಿ ಸುರೇಖ ಎಲ್ಲ ಹೇಳಿದಳು. ಸುರೇಶ ಶಾಂತವಾಗಿ ಕೇಳಿಸಿಕೊಂಡ. ಒಂದಿಲ್ಲೊಂದು ದಿನ ಈ ಸ್ಥಿತಿ ಎದುರಾಗಬಹುದು ಇದು ಅವ ಅಂದಾಜಿಸಿದ್ದ.
ಹೆಂಡತಿಗೂ ತಿಳಿ ಹೇಳುವ ಪ್ರಯತ್ನ ಮಾಡಿದ್ದ. ಸುರೇಖ ಭಾವುಕಳಾಗುತ್ತಿದ್ದಳು ಏನೋ ಗಾಬರಿ ಅವಳಲ್ಲಿರುತ್ತಿತ್ತು.ಅವಳ ಹೆದರಿಕೆಯ ಕಾರಣ ಸುರೇಶನಿಗೂ
ಗೊತ್ತಿತ್ತು. ಹಾಗಂತ ಅವ ಪಲಾಯನವಾದಿಯಾಗಲು ಅವನಿಗೆ ಇಷ್ಟವಿರಲಿಲ್ಲ. ಬದಲು ಮಗಳಿಗೆ ತಮ್ಮಿಂದಲೇ ನಿಜ ಸಂಗತಿ ಗೊತ್ತಾಗಬೇಕು ಬೇರೆ ಯಾರಿಂದಾದರೂ
ಅವಳಿಗೆ ತಿಳಿಯುವುದು ಅವನಿಗೆ ಬೇಡವಾಗಿತ್ತು.ಈಗ ಮಗಳಿಗೆ ಗೊತ್ತಾಗಿ ಹೋಗಿದೆ ಮುಚ್ಚಿಡುವುದರಲ್ಲಿ ಲಾಭವಿಲ್ಲ ಆದರೆ ಸುಮನ್ ಳ ಎಳೆ ಮನಸ್ಸಿನ ಮೇಲೆ
ಇದು ಯಾವ ರೀತಿ ಪರಿಣಾಮ ಬೀರಬಹುದು. ಇದು ಕಸಿವಿಸಿ ಅವನದು. ಅಳುಕುತ್ತಲೇ ಸುಮನ್ ಇದ್ದ ರೂಮಿಗೆ ಹೋದ.....

--------------------------------೦------------------------------------೦--------------------------------------೦----------------------

ಮದುವೆಯಾಗಿ ನಾಲ್ಕು ವರ್ಷಕಳೆದಿದ್ದವು, ಸುರೇಖಳಿಗಿಂತಲೂ ಅವಳ ತಾಯಿ ಆತಂಕಕ್ಕೆ ಒಳಗಾಗಿದ್ದರು. ಅವರ ಒತ್ತಾಯಕ್ಕೆ ಮಣಿದು ಸುರೇಖ
ಡಾಕ್ಟರ್ ಕಡೆ ಹೋಗಿದ್ದು.ಟೆಸ್ಟ ಎಲ್ಲ ಮುಗಿಸಿದ ಡಾಕ್ಟರು ಮರುದಿನ ಗಂಡನ ಜೊತೆ ಬರಲಿಕ್ಕೆ ಹೇಳಿದರು.ಮರುದಿನ ಸುರೇಶ ಹಾಗೂ ಸುರೇಖಳ ಮುಂದೆ ಬಿಚ್ಚಿಟ್ಟ
ಸಂಗತಿ ಸುಲಭವಾಗಿ ಜೀರ್ಣಿಸಲಾರದ್ದು. ಸುರೇಖಳ ಗರ್ಭಾಶಯಮಗುವನ್ನು ಹೆರಲು ಸಮರ್ಥವಾಗಿರಲಿಲ್ಲ. ಮಗು ಆಗುವ ಚಾನ್ಸು ಬಹಳ ಕಡಿಮೆ ಎಂದಾಗ ದಂಪತಿಗಳು
ಕಂಗಾಲಾದರು. ಬೇರೆ ಡಾಕ್ಟರ್ ಬಳಿಯೂ ಇದೇ ಅಭಿಪ್ರಾಯ ವ್ಯಕ್ತವಾದಾಗ ಸುರೇಖ ಹೌಹಾರಿದಳು. ತನ್ನ ಮಡಿಲು ಮಗು ಇಲ್ಲದೆ ಬರಿದು ಈ ವಾಸ್ತವ ಅವಳಿಗೆ
ಆಘಾತ ತಂದಿತ್ತು. ಸುರೇಶನಿಗೂ ಬೇಸರ ಆಗಿತ್ತು ಹಾಗಂತ ಹೆಂಡತಿ ಎದಿರು ಅಧೀರತನ ತೋರುವಹಾಗಿರಲಿಲ್ಲ. ಸುರೇಖ ಗಂಡನಿಗೆ ಇನ್ನೊಂದು ಮದುವೆಯಾಗುವ ಸಲಹೆ
ನೀಡಿದಳು.ಸುರೇಶ ನಿರಾಕರಿಸಿದ. ಹೆಂಡತಿಗೆ ಬುದ್ಧಿಹೇಳಿದ.ಸಮಸ್ಯೆ ಇದೆ ಅದನ್ನು ಎದುರಿಸುವ ಇದು ಅವನ ಆಶಾವಾದ.

ಸುರೇಖ ದೇವರಿಗೆಲ್ಲ ಹರಕೆ ಹೊತ್ತಿದ್ದಳು. ಸುರೇಶ ಹೆಂಡತಿಯ ಒತ್ತಾಯಕ್ಕೆ ಪೂಜೆ ಆರತಿ ಹೀಗೆ ಭಾಗಿ ಆಗುತ್ತಿದ್ದ. ಆದರೆ ಅವನ ಮನದಲ್ಲಿ ಬೇರೆ ಯೋಚನೆ
ಸಾಗಿತ್ತು. ಈ ನಿರ್ಧಾರ ಅವನೊಬ್ಬನೇ ತೆಗೆದುಕೊಳ್ಳುವ ಹಾಗಿರಲಿಲ್ಲ. ಸುರೇಖ ಆ ನಿರ್ಧಾರಕ್ಕೆ ಒಪ್ಪುತ್ತಾಳೊ ಇಲ್ಲವೊ ಅವನಿಗೆ ಖಾತ್ರಿ ಇರಲಿಲ್ಲ. ಸುರೇಶ ಮಗುವನ್ನು ದತ್ತು
ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದ. ಅನಾಥಾಲಯದಿಂದಲೆ ದತ್ತು ತೆಗೆದುಕೊಳ್ಳುವುದು ಇದು ಅವ ತಗೊಂಡ ನಿರ್ಧಾರ. ತನ್ನ ನಿರ್ಧಾರ ಹೆಂಡತಿಗೆ ಹೇಳಿದ. ಸುರೇಖ ಹೌಹಾರಿದಳು.
ಗಂಡ ಈ ರೀತಿಯಾಗಿ ವಿಚಾರ ಮಾಡಬಹುದು ಇದು ಅವಳಿಗೆ ಅಪಥ್ಯ ವಾಗಿತ್ತು. ಬಲವಾಗಿ ವಿರೋಧಿಸಿದಳು. ಸುರೇಶ ಹೆಚ್ಚಿಗೆ ಬಲವಂತ ಮಾಡಲಿಲ್ಲ. ಎರಡು ದಿನ ಸುಮ್ಮನಿದ್ದ
ಸುರೇಖ ಗಂಡನ ಮಾತಿಗೆ ಹುಂಗುಟ್ಟಿದಾಗ ಸ್ವತಃ ಸುರೇಶನಿಗೆ ಆಶ್ಚರ್ಯವಾಗಿತ್ತು. ಹೆಂಡತಿಗೆ ಮುಂದೆ ಬರಲಿರುವ ಚಾಲೆಂಜ್ ಗಳ ಬಗ್ಗೆ ತಿಳಿಹೇಳಿದ. ಅವಳ ನಿರ್ಧಾರ ಪಕ್ಕಾ ಅನಿಸಿದಾಗ
ತಾ ಈ ಮೊದಲೇ ಗುರ್ತುಮಾಡಿಕೊಂಡ ಸ್ವಯಂಸೇವಾ ಸಂಸ್ಥಾಗೆ ಪತ್ರ ಹಾಕಿದ. ಗಂಡ ಹೆಂಡತಿ ತಗೊಂಡ ಈ ನಿರ್ಧಾರ ಇಬ್ಬರ ಮನೆತನದ ಹಿರಿತಲೆಗಳಿಗೆ ಹಿಡಿಸಿರಲಿಲ್ಲ.
ಅದರಲ್ಲಿ ಸುರೇಶನ ಸೋದರಮಾವ ತನ್ನ ಮೂರು ಮಕ್ಕಳ ಪೈಕಿ ಒಬ್ಬನನ್ನು ದತ್ತು ತೆಗೆದುಕೊಳ್ಳಲು ದುಂಬಾಲು ಬಿದ್ದ. ಸುರೇಶ ನಿರ್ಣಯ ತಗೊಂಡಾಗಿತ್ತು. ಬಂಧು ಬಳಗ
ಇವರಿಗೆ ಮುಂದಿನ ಪರಿಣಾಮಗಳ ಬಗ್ಗೆ ಎಚ್ಚರಿಸಿದರು...ಹೆದರಿಸಿದರು. ಸುರೇಖ ವಿಚಲಿತಳಾದರೂ ಗಂಡನ ಪ್ರಶಾಂತ ಮುಖ ನೋಡಿ ಧೈರ್ಯ ತೆಗೆದುಕೊಳ್ಳುತ್ತಿದ್ದಳು.
ಆ ಸಂಸ್ಥೆಯ ವಿಚಾರಣೆಗಳು, ನಿಯಮಾವಳಿಗಳು ಪತ್ರವ್ಯವಹಾರ ಹೀಗೆ ಒಂದು ತಿಂಗಳು ಕಳೆಯಿತು. ಸುರೇಖಳಿಗೆ ಚಡಪಡಿಕೆ ಹೆಚ್ಚಾಯಿತು. ಅಂತೂ ಆ ಸಂಸ್ಥೆಯಿಂದ ಇವರಿಗೆ
ಬೇಕಾದ ಹಾಗೂ ಒಪ್ಪುವಂತಹ ಹೆಣ್ಣುಮಗು ಇದೆ ಬಂದು ನೋಡಿ ಎಂದು ಪತ್ರ ಬಂದಾಗ ಗಂಡ ಹೆಂಡತಿ ನಿರಾಳವಾದರು. ಬೆಂಗಳೂರಿಗೆ ಹೊರಡಲು ಅಣಿಯಾದರು.

ಆ ದಿನ ದಂಪತಿಗಳಿಬ್ಬರೂ ಮರೆಯುವ ಹಾಗಿಲ್ಲ.ಸಂಸ್ಥೆಯಲ್ಲಿ ಕಾಲಿಟ್ಟಾಗ ಇದ್ದ ದುಗುಡ ಅಲ್ಲಿನ
ಸಿಬ್ಬಂದಿಯ ಪ್ರೀತಿಯ ಮಾತಿನಿಂದ ಮಾಯವಾಗಿತ್ತು. ಸ್ವಲ್ಪ ಹೊತ್ತಿಗೆ ಬೆಚ್ಚನೆ ಅರಿವೆಯಲ್ಲಿ ಸುತ್ತಿದ ಮಗುವನ್ನು ತೆಗೆದುಕೊಂಡು
ಬಂದ ಆಯಾ ಸುರೇಖಳ ಕೈಯಲ್ಲಿಟ್ಟಾಗ ಸುರೇಖ ಮೂಕವಾದಳು. ಮುಷ್ಟಿಬಿಗಿದ ಪುಟ್ಟಕೈಗಳು..ಪುಟ್ಟ ಪಾದಗಳು..
ಒಂದು ತಿಂಗಳೂ ತುಂಬಿರದಿದ್ದ ಕೂಸು. ಅದರ ಅನುಭೂತಿಯಲ್ಲಿ ತೇಲಿಹೋದಳವಳು.ಮೆಲ್ಲಗೆ ಕಣ್ಣು ತೆರೆದವಳು ಬೆಳಕಿನ ಪ್ರಖರತೆಗೆ ಮತ್ತೆ ಕಣ್ಣು ಮುಚ್ಚಿದಳು.ಎಲ್ಲ ಫಾರ್ಮಾಲಿಟಿ ಮುಗಿದು ಮಗುವನ್ನು ಎದೆಗಾನಿಸಿಕೊಂಡು ದಂಪತಿ ಹೊರನಡೆದರು.
ಮುಂದಿನ ದಿನಗಳು ಅವಳ ಲಾಲನೆಯಲ್ಲಿ ಕಳೆಯಿತು. ನಾಮಕರಣ,ಮೊದಲ ವರ್ಷದ ಹುಟ್ಟುಹಬ್ಬ ಹೀಗೆ ಸಂಭ್ರಮದಲ್ಲಿ ದಿನ
ಕಳೆದುದೇ ತಿಳಿಯಲಿಲ್ಲ. .ನೋದುತ್ತಿದ್ದಂತೆ ಸುಮನ್ ಬೆಳೆದು ಶಾಲೆಗೆ ಹೊರಟಳು. ಸುರೇಶನಿಗೆ ದಿಗಿಲು ಸತ್ಯಸಂಗತಿ ಮಗಳಿಗೆ ತಿಳಿಹೇಳಬೇಕು ..ಆದರೆ ಇದಕ್ಕೆ ಹೆಂಡತಿಯ ಪ್ರಬಲ ವಿರೋಧ ಎದುರಾಯಿತು.ಸುರೇಖ ಸುಮನ್ ಬಗ್ಗೆ ಪಾಸೆಸಿವ್ ಆಗಿದ್ದಳು.
ಅವಳಿಗೆ ಚಿಕ್ಕ ನೋವಾದರೂ ಇವಳಿಗೆ ತಳಮಳವಾಗುತ್ತಿತ್ತು.
--------------------೦------------------------------೦-----------------------------------೦---------------------------------------

ಮಗಳ ಜೊಂಪುಗೂದಲಲ್ಲಿ ಬೆರ‍ಳಾಡಿಸುತ್ತ ಸುರೇಶ ಕುಳಿತಿದ್ದ. ಅತ್ತು ಅತ್ತು ಸುಸ್ತಾಗಿ ಸುಮನ್ ಮಲಗಿ
ಬಿಟ್ಟಿದ್ದಳು. ಸುರೇಖಳೂ ನಿದ್ದೆ ಹೋಗಿದ್ದಳು.ಸುರೇಶ ಯೋಚಿಸುತ್ತಿದ್ದ. ಹೇಗೆ ಈ ಸಮಸ್ಯೆ ಪರಿಹರಿಸುವುದು ಮಗಳ ಮುಗ್ಧ
ಮನಸ್ಸಿಗೆ ನೋವಾಗಿದೆ ನಿಜ ಆದರೆ ವಾಸ್ತವಕ್ಕೆ ಬೆನ್ನು ಮಾಡಿ ಅದೆಷ್ಟು ದಿನ ಇರೋದು. ಸತ್ಯ ಅವಳಿಗೆ ತಮ್ಮಿಂದಲೆ ಗೊತ್ತಾಗಿದ್ದರೆ ಅದರ ಪರಿಣಾಮ ಬೇರೆ ಆಗಿರುತ್ತಿತ್ತು ಆದರೆ ಬೇರೆಯವರಿಂದ ತಿಳಿಯೋದು ಆಘಾತ ತಂದಿದೆ .... ಯೋಚಿಸುತ್ತ
ಸುರೇಶ ಒಂದು ನಿರ್ಧಾರಕ್ಕೆ ಬಂದ. ನಿರಾಳವಾಗಿ ಮಲಗಿದ.

----------------------------------------------------೦-------------------------------------------------------------------------------

== ೨ ==

ಮಗಳು ನಿದ್ದೆ ಹೋಗಿದ್ದಳು. ಬಸ್ಸಿನಕುಲುಕಾಟಕ್ಕೆ ಸುರೇಖಳಿಗೆ ನಿದ್ದೆ ಬಂದಿರಲಿಲ್ಲ.ಪಕ್ಕದಲ್ಲಿರುವ
ಸುರೇಶನೂ ನಿದ್ದೆ ಹೋಗಿದ್ದ. ಬಸ್ಸು ಮೈಸೂರು ಮುಟ್ಟುವ ಹಾದಿಯಲ್ಲಿತ್ತು. ಗಾಳಿಗೆ ಸುಮನ್ ಕೂದಲು ಹಾರುತ್ತಿದ್ದವು.
ಕಿಟಕಿ ಮುಚ್ಚಿ ಮಗಳಸುತ್ತ ಶಾಲು ಹೊದಿಸಿದಳು. ಟೂರ್ ಎಂದು ಗಂಡ ಹೇಳಿದ್ದ ಉತ್ಸಾಹ ಇರಲಿಲ್ಲ. ಮಗಳಿಗೆ ನಾವೇನು
ಕಮಿಮಾಡಿದೆವು ಅವಳ್ಯಾಕೆ ಅರ್ಥ ಮಾಡ್ಕೊಳ್ಳಲ್ಲ ಇದೇ ಪ್ರಶ್ನೆ ಸುರೇಖಳಿಗೆ ಬಾಧಿಸುತ್ತಿತ್ತು. ಸುಮನ್ ಸಹ ಪ್ರವಾಸಕ್ಕೆ
ಅಷ್ಟೇನು ಉತ್ಸಾಹ ತೋರಿರಲಿಲ್ಲ.ಸುರೇಶ ಒಬ್ಬನೇ ಲವಲವಿಕೆ ಯಿಂದಿದ್ದ. ಅವನ ಎಣಿಕೆ ಬೇರೆ ಆಗಿತ್ತು. ಜಾಗ ಬದಲಾವಣೆ
ಒಳ್ಳೆಯದು ಅದರಲ್ಲೂ ಮೈಸೂರು ಈಗ ದಸರಾದ ಸಂಭ್ರಮದಲ್ಲಿತ್ತು. ಮಗಳರಜೆ ಅ ಸಡಗರದಲ್ಲಿ ಕಳೆಯಲಿ, ಕಹಿ ಎಲ್ಲ
ಮರೆಯಲಿಇದು ಅವನ ಬಯಕೆ. ನಿದ್ದೆ ಕಳೆದು ಎಚ್ಚರವಾದವ ಸುರೇಖಳನ್ನು ಗಮನಿಸಿದ. ಮಗಳ ಪ್ರಶ್ನೆ ನ್ಯಾಯವಾದದ್ದೇ
ಬೇರೆಯವರಿಂದ ಹುಟ್ಟಿನ ರಹಸ್ಯ ತಿಳಿದಾಗ ಸಹಜವಾಗಿಯೇ ಪ್ರತಿಕ್ರಿಯಿಸಿದ್ದಾಳೆ. ಈ ವಿಷಯ ಅವಳಿಗೆ ತಿಳಿಸುವುದು ಸರಿ ಇದು
ಅವನ ವಾದ.ಸುರೇಖಳಿಗೆ ದಿಗಿಲು ನಿಜ ತಿಳಿದು ಮಗಳು ಎಲ್ಲಿ ವಿಮುಖಳಾಗುತ್ತಾಳೊ . ಹಾಗೆ ನೋಡಿದರೆ ಅವಳ ಆತಂಕವು
ಸರಿಯೇ . ಒಟ್ಟಿನಲ್ಲಿ ಸಮಸ್ಯೆ ಎದುರಾಗಿದೆ ಈಗ ಅಂದುಕೊಂಡಂತೆ ನಡೆದರೆ ಸಮಸ್ಯೆಗೆ ಪರಿಹಾರವೂ ಇದೆ.
ಬಸ್ಸು ಮೈಸೂರು ನಿಲ್ದಾಣ ಪ್ರವೇಶಿಸಿತು. ಮಲಗಿದ್ದ ಸುಮನ್ ಳನ್ನು ಎಚ್ಚರಗೊಳಿಸಲು ಮುಂದಾದ.

-----------------------೦---------------------------------------೦---------------------------------------------------------------

ಮೈಸೂರು ದಸರಾಹಬ್ಬದ ಸಡಗರದಲ್ಲಿ ಮೀಯುತ್ತಿತ್ತು. ಬ್ಯಾಂಕ್ ನ ಅತಿಥಿಗೃಹದಲ್ಲಿ ಮೊದಲೇ
ಬುಕ್ ಮಾಡಿದ್ದರಿಂದ ವಸತಿ ಸಮಸ್ಯೆ ಇರಲಿಲ್ಲ.ಚಾಮುಂಡಿ ಬೆಟ್ಟ, ಝೂ,ಕಾರಂಜಿ ಕೆರೆ ಹೀಗೆ ಎಲ್ಲಿ ನೋಡಿದರೂ ಜನ. ಸುಮನ್
ಳಲ್ಲಿ ಉತ್ಸಾಹ ಮೂಡುತ್ತಿತ್ತು. ಹೋದವಾರದ ಬಿಗುವು ಎಲ್ಲ ಕಳಚಿಕೊಂಡಿದ್ದಳು.ಹೊಸವಾತಾವರಣಕ್ಕೆ ಸ್ಪಂದಿಸುತ್ತಿದ್ದಳು.
ರಂಗನತಿಟ್ಟು ನಲ್ಲಿ ಹತ್ತಿರದಿಂದ ತರತರಹದ ಪಕ್ಷಿಗಳನ್ನು ಹತ್ತಿರದಿಂದ ನೋಡಿ ಉಲ್ಲಸಿತಳಾದಳು. ಬಲಮುರಿಯಲ್ಲಿ ನೀರು
ಬಿಟ್ಟು ಏಳಲು ಅವಳಿಗೆ ಮನಸೇ ಇರಲಿಲ್ಲ. ಮಗಳ ಉತ್ಸಾಹ ಸುರೇಖಳಲ್ಲೂ ಹೊಸ ಉಮೇದು ತಂದಿತ್ತು. ಮಗಳು ಇನ್ನು
ಮುಂದೆ ನಗುವುದೇ ಇಲ್ಲ ಅಂತ ಆತಂಕಕ್ಕೊಳಗಾಗಿದ್ದಳು. ಭಯ ಕಳೆದುಮಗಳ ಜೊತೆ ಹಿತವಾಗಿ ನಲಿದಳು.

ಮೈಸೂರಿನಲ್ಲಿ ಮೂರುದಿನ ಕಳೆದದ್ದೇ ಗೊತ್ತಾಗಿರಲಿಲ್ಲ. ಅರಮನೆ ದೀಪಾಲಂಕಾರ ನೋಡುತ್ತಿದ್ದ
ಸುರೇಖಳಿಗೆ ಗಂಡ ಮರುದಿನ ಬೆಂಗಳೂರಿಗೆ ಹೋಗುವ ಪ್ರಸ್ತಾಪ ಮಾಡಿದ. ಅಲ್ಲಿಂದ ಮತ್ತೆ ಹುಬ್ಬಳ್ಳಿ ವಾಪಸ್ ಹೋಗುವುದು
ಎಂದು ಹೇಳಿದ. ಸುಮನ್ ಮನಸ್ಸಿಲ್ಲದ ಮನಸ್ಸಿನಿಂದ ಮೈಸೂರು ಬಿಟ್ಟಳು. ದಾರಿ ಮಧ್ಯೆ ಸಿಗೋ ವಂಡರ್ ಲಾ ದಲ್ಲಿ ಸಂಜೆವರೆಗೆ
ಕಳೆದುಹುರುಪಿನಿಂದ ಬೆಂಗಳೂರು ಸೇರಿಕೊಂಡರು.

ಗಂಡ ಏನೋ ಯೋಜನೆ ಹಾಕಿಯೇ ಈ ಟೂರ್ ಫಿಕ್ಸಮಾಡಿದಾನೆ ಇದು ಸುರೇಖಳಿಗೆ ಅಂದಾಜಿತ್ತು.
ಆದರೆ ಕೇಳಿದರೂ ಅವನ ಮುಗುಳ್ನಗೆ ಮಾತ್ರ ಉತ್ತರವಾಗಿತ್ತು, ಬೆಂಗಳೂರು ಜತೆ ಒಂದು ಅವಿನಾಭಾವ ಸಂಬಂಧ ಇದೆ ಸುರೇಖಳಿಗೆ
ತಾಯ್ತನದ ಅನುಭೂತಿ ಕೊಟ್ಟ ಊರಿದು. ಭಯ ಮಿಶ್ರಿತ ಕಂಪನ ಅವಳಲ್ಲಿ. ಮರುದಿನ ಅವರು ಕುಳಿತ ಆಟೋ ಬಾಣಸವಾಡಿ ಕಡೆ
ತಿರುಗಿದಾಗ ಎದೆ ಡವ ಗುಟ್ಟಿತು ಸುರೇಶ ಮಾತ್ರ ನಿರಾತಂಕವಾಗಿದ್ದ. ಸುಮನ್ ಅಪ್ಪ ಕೊಡಿಸಿದ ವಿಡಿಯೋ ಗೇಮ್ ನಲ್ಲಿ ಮುಳುಗಿದ್ದಳು. ರಸ್ತೆಗಳು ಪರಿಚಿತ ಅನಿಸಿದವು ಸುರೇಖಳಿಗೆ ಆತಂಕದಿಂದ ಗಂಡನ ಕೈ ಹಿಡಿದಳು. ಅವಳ ಕೈಗೆ ಮೆಲುವಾಗಿ ತಟ್ಟಿದ
ಸುರೇಶ ಮುಗುಳ್ನಕ್ಕ. ಆಟೋ ಒಂದು ಕಟ್ಟಡದ ಮುಂದೆ ನಿಂತಿತ್ತು. ಕಟ್ಟಡದ ವಿನ್ಯಾಸ ಬದಲಾಗಿರಲಿಲ್ಲ. ತಂಗಾಳಿ ಬೀಸುತ್ತಿದ್ದರೂ ಸುರೇಖ ಬೆವರಿದ್ದಳು. ಗೇಟು ತೆಗೆದು ಒಳನಡೆದ ಗಂಡ ಹಾಗೂ ಮಗಳನ್ನು ಹಿಂಬಾಲಿಸಿದಳು....

-----------------------------೦--------------------------------------೦-----------------------------------------------------------------

ಎಲ್ಲ ಮೊದಲೇ ಯೋಜನೆ ಹಾಕಿಕೊಂಡಿದ್ದ ಸುರೇಶ. ಆ ಬಗ್ಗೆ ಸಂಸ್ಥೆಯ ಅಧಿಕಾರಿಗಳಲ್ಲಿ ಮಾತೂ
ಆಡಿದ್ದ.ಸಹಕಾರ ಕೊಡುವುದಾಗಿ ಹೇಳಿದ್ದರು.ಅವರೆಲ್ಲ ಈಗ ಆಟೋದಿಂದಿಳಿದು ಪ್ರವೇಶಿಸಿದ ಸಂಸ್ಥೆಯಿಂದಲೇ ಸುಮನ್ ಳನ್ನು
ದತ್ತು ತೆಗೆದುಕೊಂಡಿದ್ದರು. ಸುರೇಶನಿಗೂ ಪರಿಣಾಮದ ಬಗ್ಗೆ ಅಳುಕಿತ್ತು ಇದು ಬಹಳ ಸೂಕ್ಷ್ಮ ವಿಚಾರ. ಮಗಳ ಪ್ರತಿಕ್ರಿಯೆ ಮೇಲೆ
ಎಲ್ಲ ನಿಂತಿತ್ತು. ಆ ಸಂಸ್ಥೆಯ ಮೇಲಧಿಕಾರಿಣಿ ಇವರನ್ನು ಆದರದಿಂದ ಬರಮಾಡಿಕೊಂಡಳು. ಕಾಫಿ ಸೇವನೆ ನಂತರ ಸುಮನಳನ್ನು
ಮೇಲಿನ ರೂಮಿನಲ್ಲಿರೋ ಆಟಿಗೆ ತೋರಿಸುವ ನೆವದಿಂದ ಕರೆದೊಯ್ಯಲಾಯಿತು...ಸುರೇಶ ,ಸುರೇಖ ಮಗಳು ಮೇಲೆ ಹೋಗುವುದನ್ನೇ ನೋಡುತ್ತಿದ್ದರು, ಸುರೇಖಳ ತಲೆ ಗೊಂದಲದ ಗೂಡಾಗಿತ್ತು.ಅವಳ ಪ್ರಶ್ನೆಗಳಿಗೆಲ್ಲ ಸುರೇಶನ ಮುಗುಳ್ನಗೆ
ಉತ್ತರವಾಗಿತ್ತು.
------------------೦---------------------------------೦--------------------------------೦---------------------------------------------

ಆಟಿಗೆ ನೋಡುತ್ತ ಕುಳಿತ ಸುಮನ್ ಸುತ್ತಲೂ ಕಣ್ಣುಹಾಯಿಸಿದಳು. ಅವಳ ಅರಿವಿಗೆ ನಿಲುಕದ ಜಾಗೆ
ಸುತ್ತ ತೊಟ್ಟಿಲುಗಳು..ಅವುಗಳಲ್ಲಿನ ಕೂಸುಗಳು. ದೊಡ್ಡವನ್ನು ನೆಲದ ಕಾರ್ಪೆಟ್ ಮೇಲೆ ಬಿಡಲಾಗಿತ್ತು. ಸುತ್ತ ಹರಡಿದ ಆಟಿಗೆ
ಗಳಲ್ಲಿ ಮಗ್ನ ವಾಗಿದ್ದವು. ನಿಧಾನವಾಗಿ ತಾ ನೋಡುತಿರುವ ಜಾಗೆ ತಾನಿರುವ ಸ್ಥಳದ ಬಗ್ಗೆ ಗೊತ್ತಾಗತೊಡಗಿತು. ರೂಪಾ ಹೇಳಿದ
ಮಾತು ಗುಂಯ್ ಗುಟ್ಟಿತು. ನಾ ಅಮ್ಮನಿಗೆ ಹುಟ್ಟಿಲ್ಲ ಇದು ಗೊತ್ತಾಗಿದ್ದೇ ಇತ್ತೀಚೆಗೆ ಅಪ್ಪ ಅಮ್ಮ ಏನೋ ಮಾತಾಡುತ್ತಿದ್ದವರು ನಾ ಬಂದಿದ್ದು ನೋಡಿ ಮಾತು ನಿಲ್ಲಿಸುತ್ತಿದ್ದರು ಏನೋ ಇದೆ ಇದು ಕಸಿನ್ಸ್ ನೋಡೋ ದೃಷ್ಟಿಯಲ್ಲಿ,
ಮೌಶಿ ಕಾಕು ಅಮ್ಮನೊಡನೆ ಆಡುತ್ತಿದ್ದ ಮಾತಿನಲ್ಲಿ ಇಣುಕುತ್ತಿತ್ತು. ರೂಪ ಜಗಳ ತೆಗೆದು ಆಡಿದ ಮಾತು ಅವಮಾನ ಮಾಡಿತ್ತು.
ನಾ ಅವಳಿಗೆ ಗೆಳತಿ ಇರದಿರಬಹುದು ನಾಲ್ಕು ಜನರ ಮುಂದೆ ಹೀಗೆ ಒಮ್ಮೆಲೆ ಅಂದಾಗ ಸಿಟ್ಟು ಬಂದಿತ್ತು. ಸಿಟ್ಟು ತಿರುಗಿದ್ದು ಅಮ್ಮನ
ಮೇಲೆ ಇಷ್ಟುದಿನ ನನ್ನದು ಎಂದು ತಿಳಿದ ವಸ್ತು ನನ್ನದಲ್ಲ ಎಂದಾಗ ನೋವಾಗಿತ್ತು. ಈಗ ಎಲ್ಲ ಗೊತ್ತಾಗುತಿದೆ. ಅಂದರೆ ನಾನೂ
ಹೀಗೆ ಈಗ ಇವರಿರೋ ಜಾಗೆಯಲ್ಲಿದ್ದೆ .... ಯಾವುದೋ ಮಗು ತೊಟ್ಟಿಲಲ್ಲಿ ಮಲಗಿದ್ದು ಜೋರಾಗಿ ಅಳಲಾರಂಭಿಸಿತು.
ಆಯಾ ಒಬ್ಬಳು ಬಂದು ಅದರ ದುಬಟಿ ಬದಲಾಯಿಸಿದಳು..ಮಗು ಅಳು ನಿಲ್ಲಿಸಲಿಲ್ಲ. ಅದಕ್ಕೆ ಹಸಿವಾಗಿರಬೇಕು ಆಯಾ ಹಾಲು
ಬಾಟಲಿಯಲ್ಲಿ ತರುವವರೆಗೂ ಅದು ಅಳುತ್ತಲೇ ಇತ್ತು. ಹೌದಲ್ಲ ತಾ ಸ್ಕೂಲಿನಲ್ಲಿ ಬಿದ್ದು ಬಂದಾಗ ಅಮ್ಮ ಚಡಪಡಿಸುವುದೇಕೆ
ಹೋದ ವರ್ಷ ಜ್ವರ ಬಂದಾಗ ಇಡೀ ರಾತ್ರಿ ಅಪ್ಪ ಅಮ್ಮ ಎಚ್ಚರಿದ್ದು ಒದ್ದೆಪಟ್ಟಿ ಬದಲಾಯಿಸುತ್ತಿದ್ದುದು ನೆನಪಿಗೆ ಬಂತು.
ಅಂದರೆ ಅಮ್ಮ ಅಮ್ಮನೇ ಅವಳು ಬದಲಾಗಳು.... ಗಕ್ಕನೇ ಅಪ್ಪ ಅಮ್ಮನ ನೆನಪು ಬಂತು. ನಾ ಇಲ್ಲಿ ಏನು ಮಾಡುತಿರುವೆ
ಅವರೆಲ್ಲಿ ಗಾಬರಿಯಾಯಿತು ಸುಮನ್ ಳಿಗೆ. ಅಲ್ಲಿಂದ ಎದ್ದವಳು ಮೆಟ್ಟಿಲು ಇಳಿದು ನೋಡಿದಳು. ಗೇಟ ಹತ್ತಿರ ನಿಂತ ಅಪ್ಪ ಅಮ್ಮ ಕಂಡರು....
------------------------------೦-----------------------------------------೦----------------------------------------------------------

ಹನಿಯುತ್ತಿದ್ದ ಕಣ್ಣೀರು ಒರೆಸಿಕೊಂಡವಳಿಗೆ ಬಾಗಿಲಲ್ಲಿ ನಿಂತ ಸುಮನ್ ಕಂಡಳು.ಉದ್ವೇಗದಿಂದ
ಕಂಪಿಸುವಳನ್ನು ನೋಡಿ ಗಾಬರಿ ಆದಳು. ನೋಡುವುದರಲ್ಲಿಯೇ ಮಗಳು ತೆಕ್ಕೆ ಹಾಕಿ ಅಳುತ್ತಿದ್ದಳು."ಸಾರಿ ಅಮ್ಮ..." ಉದ್ವೇಗದಿಂದ ದನಿ ಕಂಪಿಸುತ್ತಿತ್ತು. ಮಗಳನ್ನು ಬಾಚಿ ತಬ್ಬಿದ ಸುರೇಖ ಸಹ ಅಳುತ್ತಿದ್ದಳು.ನೋಡುತ್ತಿದ್ದ ಸುರೇಶನ ಕಣ್ಣೂ
ಹನಿಗೂಡಿದವು. ಆಗಸದಲ್ಲಿ ಮಂಜು ಕರಗಿ ಸೂರ್ಯ ಮಿನುಗುತ್ತಿದ್ದ.

10 ಕಾಮೆಂಟ್‌ಗಳು:

 1. ಉಮೇಶ್ ಸಾರ್...
  ಕಥೆ ಚೆನ್ನಾಗಿದೆ. ಹೀಗೇ ನನಗೆ ತಿಳಿದವರೊಬ್ಬರ ಜೀವನದಲ್ಲೂ ಆಗಿದೆ, ಆದರೆ ಆ ಹುಡುಗಿಗೆ ಸಾಕಿದ ಅಪ್ಪ ಅಮ್ಮನೇ ಹೇಳಿದ್ದಾರೆ.... ಹುಡುಗಿಗೆ ಇನ್ನೂ ಅವರ ಮನಸ್ಸಿನ ಸ್ಥಿತಿ ಅರ್ಥವೇ ಆಗಿಲ್ಲ... ಅವಳು ಇನ್ನೂ ಅಸಹಕಾರದಲ್ಲೇ ಕುಳಿತಿದ್ದಾಳೆ. ನನ್ನನ್ನು ಕಳಿಸಿಬಿಡಿ ಎಂಬ ರಾಗ ಹಾಡುತ್ತಲೇ ಇದ್ದಾಳೆ.... ಮುಂದೇನಾಗತ್ತೋ ಗೊತ್ತಿಲ್ಲ...

  ಶ್ಯಾಮಲ
  PS: By mistake this comment was published in the other story.... Sorry sir...

  ಪ್ರತ್ಯುತ್ತರಅಳಿಸಿ
 2. ಶಾಮಲ ಅವರಿಗೆ ಪ್ರತಿಕ್ರಿಯೆಗಾಗಿ ಧನ್ಯವಾದಗಳು ನಿಮ್ಮ ಪ್ರೋತ್ಸಾಹ ಹೀಗೆ ಇರಲಿ....

  ಪ್ರತ್ಯುತ್ತರಅಳಿಸಿ
 3. ಉಮೇಶ್ ಸರ್, ಕಥೆ ಓದಿದ್ದು ನೆನಪಿಲ್ಲ ಆದ್ರೂ ಯಾಕೋ ಪರಿಚಿತ ಅನ್ಸುತ್ತೆ...ಬಹುಶಃ ಇಂತಹುದೇ ಘಟನೆಗೆ ಹತ್ತಿರದ ನೈಜ ಘಟನೆಯೊಂದು ನಾನು ಮಣಿಪುಅರದಲ್ಲಿದ್ದಾಗ ನಡೆದಿದ್ತ್ತು...
  ನಿಮ್ಮ ಕಥೆಯ ಮುಂದಿನ ಭಾಗಕ್ಕೆ ನಿರೀಕ್ಷೆ..ಈಗ ಹೆಚ್ಚಾಗಿದೆ

  ಪ್ರತ್ಯುತ್ತರಅಳಿಸಿ
 4. ಜಲನಯನ ಪ್ರತಿಕ್ರಿಯೆಗಾಗಿ ಧನ್ಯವಾದಗಳು. ಅಂದಹಾಗೆ ಕತೆಯ ಸಂಪೂರ್ಣಭಾಗ ಇದೇ ಇನ್ನೊಂದು ಭಾಗ ಇಲ್ಲ.

  ಪ್ರತ್ಯುತ್ತರಅಳಿಸಿ
 5. ಕಥೆ ಚೆನ್ನಾಗಿದೆ... ಇದು ನಿಜ ಕಥೆಯೇ?? ಓದಿದಾಗ ಹಾಗೆ ಅನ್ನಿಸಿತು...

  ಪ್ರತ್ಯುತ್ತರಅಳಿಸಿ
 6. ಇಲ್ಲ ಗೋರೆ ಸರ್ ಇದು ನಿಜ ಕಥೆ ಅಲ್ಲ

  ಪ್ರತ್ಯುತ್ತರಅಳಿಸಿ
 7. ಕನ್ನಡ ಬ್ಲಾಗ ಲೋಕದ ಸಮೀಕ್ಷೆ: ನೀವೂ ಭಾಗವಹಿಸಿ ಮತ್ತು ನಿಮ್ಮ ಗೆಳೆಯರಿಗೂ ತಿಳಿಸಿ
  ಆತ್ಮೀಯರೆ,
  ಅತ್ಯಂತ ಶೀಘ್ರವಾಗಿ ಹಾಗೂ ಗುಣಾತ್ಮಕವಾಗಿ ಬೆಳೆಯುತ್ತಿರುವ ಒಂದು ಪ್ರಬಲ ಮಾದ್ಯಮ “ಬ್ಲಾಗಿಂಗ್”, ಇದಕ್ಕೆ ಕನ್ನಡಿಗರು ಮತ್ತು ಕನ್ನಡ ಬ್ಲಾಗಿಂಗ ಹೋರತಲ್ಲ. ಇವತ್ತಿಗೆ ಕನ್ನಡದಲ್ಲು ಸುಮಾರು ೮೦೦ಕ್ಕೂ ಹೆಚ್ಚು ಬ್ಲಾಗಗಳಿವೆ. ಭಾರತಿಯ ಭಾಷೆಗಳ ಬ್ಲಾಗಿಂಗ ಸಂಭ್ರಮದಲ್ಲಿ ಕನ್ನಡವಿಗ ಪ್ರಖರ ಪ್ರಕಾಶ, ಸುಂದರ ಅಕ್ಷರಗಳ ಉದ್ಯಾನ.
  ಬಹಳಷ್ಟು ಬ್ಲಾಗ್‍ಗಳಲ್ಲಿ ಒಂದು, ಎರಡು ಪೋಸ್ಟುಗಳಿವೆ. ಕೆಲವೆಡೆ ಒಬ್ಬರೇ ಐದಾರು ಬ್ಲಾಗ್ ಮಾಡಿಕೊಂಡಿದ್ದಾರೆ. ಏನೇ ಆದರೂ ಉತ್ಸಾಹ-ಆಕಾಶಕ್ಕೆ ಏಣಿ ಹಾಕುವಷ್ಟಿದೆ. ಹೀಗಾಗಿ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ಈ ಸಮೀಕ್ಷೆ ನಮ್ಮ ಮನದಲ್ಲಿ ಹುಟ್ಟಿದ್ದು, ಈ ಸಮೀಕ್ಷೆ ಕನ್ನಡ ಬ್ಲಾಗುಗಳ ಮತ್ತು ಬ್ಲಾಗಿಗರ ವಿಶೇಷಗುಣ, ಅಪೂರ್ವಲಕ್ಷಣ, ವೈಶಿಷ್ಟ್ಯಗಳನ್ನು ಅರ್ಥೈಸಿಕೊಳ್ಳುವ ಒಂದು ಸಣ್ಣ ಪ್ರಯತ್ನ.
  ಆತ್ಮೀಯ ಬ್ಲಾಗ ಬಂಧುಗಳೇ, ಈ ಸಮೀಕ್ಷೆಯ ಸಫಲತೆ ನಿಮ್ಮ ಸಹಯೋಗದಿಂದ ಮಾತ್ರ ಸಾಧ್ಯ. ಹೀಗಾಗಿ ದಯವಿಟ್ಟು ಈ ಕೆಳಗೆ ನೀಡಿದ ಸಂಪರ್ಕ ಕೊಂಡಿ (Link) ಚಿಟುಕಿಸಿ ಅಲ್ಲಿ ನೀಡಲಾಗಿರುವ ಕೆಲವು ಪ್ರಶ್ನೆಗಳಿಗೆ ಉತ್ತರಿಸಿ. ನೀವು ನಿಡಿದ ಎಲ್ಲ ಮಾಹೀತಿಗಳನ್ನು ರಹಸ್ಯವಾಗಿರಿಸುವುದಾಗಿಯೂ ಮತ್ತು ಸಮೀಕ್ಷೆಯ ಫಲಿತಾಂಶವನ್ನು ಕೇವಲ ಶೈಕ್ಷಣಿಕ ಕಾರ್ಯಗಳಿಗೆ ಮಾತ್ರ ಉಪಯೋಗಿಸಿಕೊಳ್ಳಲಾಗುವುದಾಗಿ ಈ ಮೂಲಕ ಪ್ರಮಾಣಿಸುತ್ತೆವೆ.
  http://spreadsheets.google.com/viewform?formkey=dF90eEtaNDlnNkRQQmVPZlBRSE02OGc6MA..
  ತಮ್ಮ ಸಲಹೆ ಮತ್ತು ಸಂದೇಹಗಳಿಗಾಗಿ shettaru@gmail.com ಗೆ ಮಿಂಚಂಚೆ ಕಳುಹಿಸಿ.
  ಧನ್ಯವಾದಗಳೊಂದಿಗೆ
  ಈರಣ್ಣ ಶೆಟ್ಟರು ಮತ್ತು ಗ್ರಂಥಪಾಲಕ ಗೆಳೆಯರು

  ಪ್ರತ್ಯುತ್ತರಅಳಿಸಿ
 8. ತುಂಬಾ ಚೆನ್ನಾಗಿದೆ ಕಥಾ ವಸ್ತು ಹಾಗೂ ಅದರ ನಿರೂಪಣೆ.

  ಪ್ರತ್ಯುತ್ತರಅಳಿಸಿ
 9. ಉಮೇಶ್ ಸರ್, ನನ್ನ ಗೆಳತಿ ಸಹ ಹಿಂಗ ಒಂದು ಹುಡುಗಿನ್ನ ದತ್ತಕ್ಕ ತೊಗೊಂಡಾರ. ನಿಮ್ ಕಥಿ ಓದಿ ನನಗ ಅವ್ರ ಬಗ್ಗೆ ಚಿಂತಿ ಶುರುವಾಗೇದ...ಒಂದಿನ ಅವ್ರೂ ಇದನ್ನ ಫೇಸ್ ಮಾಡ್ಲಿಕ್ಕೇಬೇಕಲ್ಲ!
  ಕತಿ ಛೊಲೊ ಅದರೀ.

  ಪ್ರತ್ಯುತ್ತರಅಳಿಸಿ